ಐಂಥೊವೆನ್, ವಿಲೆಂ: 1860-1927. ಲೀಡನ್ ವಿಶ್ವವಿದ್ಯಾನಿಲಯದಲ್ಲಿ ಅಂಗರಚನಾವಿಜ್ಞಾನದ ಪ್ರಾಧ್ಯಾಪಕ. ಆಸಕ್ತಿ ಭೌತವಿಜ್ಞಾನದಲ್ಲೂ ಇತ್ತು. ಗುಂಡಿಗೆಯ ವಿದ್ಯುದ್ವಿಭವಗಳಲ್ಲಿ ಉಂಟಾಗುವ ಸೂಕ್ಷ್ಮತಮ ವ್ಯತ್ಯಾಸಗಳನ್ನು ಗುರುತಿಸುವ ಎಲೆಕ್ಟ್ರೊ ಕಾರ್ಡಿಯೋಗ್ರಾಫ್ ಸಾಧನವನ್ನು ಕಂಡು ಹಿಡಿದ. ಇದಕ್ಕಾಗಿ ಈತನಿಗೆ 1924ರಲ್ಲಿ ನೊಬೆಲ್ಪಾರಿತೋಷಕ ದೊರೆಯಿತು. ಗುಂಡಿಗೆಯಲ್ಲೇಳುವ ವಿದ್ಯುತ್ತಿನ ವಿಚಾರದಲ್ಲಿ ಮೊದಲಿನಿಂದಲೂ ಬಲು ಆಸಕ್ತನಾಗಿದ್ದು, ಗುಂಡಿಗೆ ಬಡಿದುಕೊಳ್ಳುವಾಗ ಏಳುವ ವಿದ್ಯುತ್ತಿನ ಸೂಕ್ಷ್ಮತಮ ವಿದ್ಯುದ್ವಿಭವ ವ್ಯತ್ಯಾಸಗಳನ್ನು ತೋರುವ ದಾರದ ಗ್ಯಾಲ್ವನೊಮೀಟರನ್ನು ಕಂಡುಹಿಡಿದ. ಅದು ಸೂಚಿಸುವ ವ್ಯತ್ಯಾಸಗಳನ್ನು ಗುರುತಿಸುವ ಯಂತ್ರಸಾಧನವಾಗಿ ಎಲೆಕ್ಟ್ರೊಕಾರ್ಡಿಯೋಗ್ರಾಫ್ ಸುಮಾರು 20 ವರ್ಷಗಳ ಕಾಲ ಬಳಕೆಯಲ್ಲಿತ್ತು. ಹೀಗೆ ಗುರುತಿಸಿದ ಚಿತ್ರವನ್ನು ಗುಂಡಿಗೆಯ ತಂತಿ ಸುದ್ದಿ ಎಂದು ಅವನು ಕರೆಯುತ್ತಿದ್ದ. ಇದೇ ಅಲ್ಲದೆ ಇದನ್ನು ಚಿತ್ರಿಸಲು ಮೈಯಲ್ಲಿ ತಂತಿಗಳನ್ನು ಎಲ್ಲೆಲ್ಲಿ ತಗುಲಿಸಬೇಕೆಂದೂ ಇವನು ನಿರ್ಧರಿಸಿದ್ದು ಈಗಲೂ ಜಾರಿಯಲ್ಲಿದೆ. ಇಂದು ಬಳಕೆಯಲ್ಲಿರುವ ಸುಧಾರಿತ ಎಲೆಕ್ಟ್ರೊಕಾರ್ಡಿಯೋಗ್ರಾಫ್ ಕೂಡ ಇದೇ ಮಾದರಿಯದು.        						        (ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ